ದೈವಸ್ಥಾನದ ಪರಿಚಯ / About Us
ಶ್ರೀ ತಿಮ್ಮಣ್ಣ ನಾಯಕ ದೈವಸ್ಥಾನವು ಸುಮಾರು 150 ವರ್ಷಗಳ ಇತಿಹಾಸ ಹೊಂದಿದ್ದು ಶ್ರೀ ದೈವವು ಹೊನ್ನಾಳ ಬಕ್ಕಪಟ್ಟಣದಲ್ಲಿ ನೆಲೆಯಾಗಿದ್ದು ಅಲ್ಲಿ ನಮ್ಮ ಹಿರಿಯರು ಪೂಜೆಗಳನ್ನು ನಡೆಸುತ್ತಾ ಬಂದಿರುತ್ತಾರೆ. ಹೀಗೆ ನಡೆದುಕೊಂಡು ಬರುತ್ತಾ ಕಾರಣಾಂತರಗಳಿಂದ ಅಲ್ಲಿಗೆ ಹೋಗಿ ಪೂಜೆ ಮತ್ತು ಭೋಗ ಸೇವೆಗಳನ್ನು ಮಾಡಲು ಅಸಾಧ್ಯವಾಗಿದ್ದರಿಂದ ಅಲ್ಲಿರುವ ದೈವಗಳಿಗೆ ಪೂಜೆ ಮತ್ತು ಭೋಗ ಸೇವೆಗಳು ನಿಂತು ಹೋಗಿರುತ್ತದೆ.
ಒಮ್ಮೆ ನಮ್ಮ ಹಿರಿಯರಾದ ಬಚ್ಚ ಗಾಣಿಗ ಎನ್ನುವ ವ್ಯಕ್ತಿಗೆ ಕನಸಿನಲ್ಲಿ ದೈವವು ಪ್ರೇರೇಪಿಸಿ ಚಂಡೆ ವಾದ್ಯಗಳ ಶಬ್ದಗಳನ್ನು ಮಾಡಿಕೊಂಡು ದೈವ ಇರುವ ಜಾಗಕ್ಕೆ ಹೋಗು (ಬಕ್ಕಪಟ್ಟಣ) ಅಲ್ಲಿ ಸುಳಿಗಾಳಿಯೊಂದು ಏಳುತ್ತದೆ ನಂತರ ಅದನ್ನು ಹಿಂಬಾಲಿಸಿಕೊಂಡು ಬಂದು ಆ ಸುಳಿಗಾಳಿಯು ಎಲ್ಲಿ ನಿಲ್ಲುತ್ತದೋ ಅಲ್ಲಿ ನಾನು ನೆಲೆಯಾಗುತ್ತೇನೆ ಎಂಬ ರೀತಿಯಲ್ಲಿ ಕನಸಿನಲ್ಲಿ ತಿಳಿಸಿತು. ಅದೇ ಪ್ರಕಾರವಾಗಿ ಹಿರಿಯರಾದ ಬಚ್ಚ ಗಾಣಿಗರು ಮತ್ತು ಅವರ ಹಿರಿಯರು ಕುಟುಂಬದವರನ್ನೆಲ್ಲ ಸೇರಿಕೊಂಡು ನಮ್ಮ ದೈವ ಇರುವ ಜಾಗಕ್ಕೆ ತೆರಳಿ ವಾದ್ಯ, ಚೆಂಡೆ ಶಬ್ದ ಮಾಡುವ ಮುಖೇನ ಪ್ರಾರಂಭಿಸಿದರು. ಅಲ್ಲಿಗೆ ಒಂದು ಸುಳಿಗಾಳಿಯು ಎದ್ದಿತು ಮತ್ತು ಅದನ್ನು ಹಿಂಬಾಲಿಸಿಕೊಂಡು ಬರುತ್ತಾ ಸುಳಿಗಾಳಿಯು ಈಗ ಇರುವ ದೈವಸ್ಥಾನ ಜಾಗದಲ್ಲಿ ಬಂದು ನಿಂತಿತ್ತು. ಈ ಜಾಗವು ಅಂದು ಹಾರಾಡಿ ಪಠೇಲರ ಮನೆಯವರ ಸುಪರ್ದಿಯಲ್ಲಿದ್ದು, ದೈವವು ಇಲ್ಲಿ ನೆಲೆ ನಿಲ್ಲಲು ಅವರಲ್ಲಿ ಕೇಳಿಕೊಂಡಾಗ ಅವರು ಸ್ಥಳಾವಕಾಶ ಮಾಡಿಕೊಟ್ಟರು. ಹಾಗೆಯೇ ಎಲ್ಲಾ ದೈವಗಳ ಜೊತೆ ನಾಗವೂ ಕೂಡ ಬಂದು ಇಲ್ಲಿ ನೆಲೆಯಾಯಿತು. ಹುಲ್ಲು ಮಾಡಿನೊಂದಿಗೆ ದೈವಗಳನ್ನು ಈ ಜಾಗದಲ್ಲಿ ಪ್ರತಿಷ್ಠಾಪಿಸಲಾಯಿತು. ಹಾಗೆಯೇ ತದನಂತರ ಪಂಜುರ್ಲಿ ಹಾಗೂ ಕಲ್ಲುಕುಟ್ಟಿಗ ದೈವಗಳು ಬಂದು ಇಲ್ಲಿ ನೆಲೆಯಾಯಿತು.
ಅಂದಿನಿಂದ ಇಲ್ಲಿಯ ತನಕ ಹಲವಾರು ದರ್ಶನ ಪಾತ್ರಿಗಳು ದೈವಗಳ ನರ್ತನ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಅವರಲ್ಲಿ 1) ಬಚ್ಚ ಗಾಣಿಗ, 2) ಸಂಕಮ್ಮ ಕುಂದಾಪುರ, 3) ಕೋಡಿ ಶೀನ ಗಾಣಿಗ ಹಾರಾಡಿ, 4) ಶೀನ ಗಾಣಿಗ ಹಾರಾಡಿ, 5) ಗೋಪಮ್ಮ ಹಾರಾಡಿ, 6) ಶಂಭು ಗಾಣಿಗ ಹಾರಾಡಿ, 7) ಚಂದ್ರಕಾಂತ ಗಾಣಿಗ ಹಾರಾಡಿ ಇವರೆಲ್ಲರೂ ದೈವಗಳ ನರ್ತನ ಸೇವೆಯನ್ನು ನೆರವೇರಿಸಿರುತ್ತಾರೆ ಮತ್ತು ಶಂಭು ಗಾಣಿಗ ಹಾರಾಡಿ ಇಂದಿಗೂ ಕೂಡ ದೇವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಅಂದಿನಿಂದ ದೈವಗಳಿಗೆ ಪೂಜಾ ಸೇವೆಯನ್ನು ನಮ್ಮ ಕುಟುಂಬದ ಹಿರಿಯರು ಮಾಡಿಕೊಂಡು ಬಂದಿದ್ದು, ತದನಂತರ ಹಾರಾಡಿ ರಾಮ ಗಾಣಿಗರ ನೇತೃತ್ವದಲ್ಲಿ ನಡೆಸಿಕೊಂಡು ಬಂದು ಹಾರಾಡಿ ಕಿಟ್ಟು ಗಾಣಿಗರು, ನಂತರ ಚಂದ್ರಕಾಂತ ಗಾಣಿಗರು ಹಾಗೂ ನಂತರದ ದಿನಗಳಲ್ಲಿ ಮಂಜುನಾಥ ಗಾಣಿಗ ಹಾರಾಡಿ ಹಾಗೂ ಈಗ ಕುಟುಂಬದವರು ನೆರವೇರಿಸಿಕೊಂಡು ಬರುತ್ತಿದ್ಧಾರೆ.